ಮುಂಬೈ: ಭಾರೀ ಮಳೆಯಿಂದಾಗಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸುಮಾರು ₹7,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಿಸ್ಸಿಂಗ್ ಲಿಂಕ್ ಸುರಂಗದ ಒಂದು ಭಾಗ ಕುಸಿದ ಪರಿಣಾಮ ಸೋಮವಾರ ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತು. ಇದರಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾವಿರಾರು ವಾಹನಗಳು ಸಿಲುಕಿಕೊಂಡು ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು.
ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ನಿರ್ಮಿಸಿರುವ 19 ಕಿ.ಮೀ. ಮಿಸ್ಸಿಂಗ್ ಲಿಂಕ್ ಯೋಜನೆಯು ಮುಂಬೈ-ಪುಣೆ ನಡುವಿನ ಪ್ರಯಾಣದ ಅವಧಿಯನ್ನು 20ರಿಂದ 25 ನಿಮಿಷಗಳಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಆದರೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಸುರಂಗದ ಒಂದು ಭಾಗ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯೋಜನೆಯಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ನಡೆದಿದೆ ಎಂದು ಕಾಂಗ್ರೆಸ್ ಹಾಗೂ ಶಿವಸೇನೆ (ಯುಬಿಟಿ) ನಾಯಕರು ಆರೋಪಿಸಿದ್ದಾರೆ.
